ಬೆಳ್ಳೂರು:ಕೇರಳ ಕರ್ನಾಟಕ ಗಡಿ ಭಾಗ ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಮೂಲಸ್ಥಾನ ಚೆಂಡೆತ್ತಡ್ಕ ಬಯಲಿನ ಪವಿತ್ರ ಜಾಂಬ್ರಿ ಗುಹೆ ಸಮೀಪ ಕೋಳಿ ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆದು ಪುಣ್ಯ ಪ್ರಸಿದ್ಧ ಪರಿಸರವನ್ನು ಮಲೀನಗೊಳಿಸುತ್ತಿರುವುದಾಗಿ ದೂರಲಾಗಿದೆ.
ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಹಲವು ಶತಮಾನಗಳಿಂದಲೂ 12 ವರ್ಷಗಳಿಗೊಮ್ಮೆ ಜಾಂಬ್ರಿ ಗುಹಾ ಪ್ರವೇಶೋತ್ಸವ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಗುತ್ತಿದೆ. ನೆಟ್ಟಣಿಗೆ ದೇವಾಲಯ ಕೇರಳ ವ್ಯಾಪ್ತಿಯಲ್ಲಿದ್ದರೆ ಜಾಂಬ್ರಿ ಗುಹೆ ಕರ್ನಾಟಕ ವ್ಯಾಪ್ತಿಯಲ್ಲಿದ್ದು ಎರಡೂ ರಾಜ್ಯಗಳ ವ್ಯಾಪ್ತಿಯಲ್ಲಿ ತ್ಯಾಜ್ಯ ಎಸೆಯಲಾಗುತ್ತಿದೆ.
ಆರ್ಲಪದವಿನಿಂದ ಗಿಳಿಯಾಲು, ಮಣ್ಣಂಗಳ ಹಾಗೂ ಭರಣ್ಯ, ದೇವಸ್ಯ ಅದೇ ರೀತಿ ಕಿನ್ನಿಂಗಾರು ವಾಣೀನಗರದಿಂದ ಸರಳಿಮೂಲೆ, ಈಂದುಮೂಲೆ ದಾರಿಯಾಗಿ ವಾಹನ ಮೂಲಕ ಬಂಟಾಜೆ ರಕ್ಷಿತಾರಣ್ಯದ ಗಡಿಯಲ್ಲಿನ ಇತಿಹಾಸ ಪ್ರಸಿದ್ಧ ಜಾಂಬ್ರಿ ಗುಹೆ ತಲುಪಬಹುದಾಗಿದ್ದು 14 ಎಕರೆ ವಿಸ್ತಾರದ ಚೆಂಡೆತ್ತಡ್ಕ ಬಯಲು ಸಮಾಜ ದ್ರೋಹಿಗಳ ತಾಣವಾಗಿ ಮಾರ್ಪಡುತ್ತಿದೆ.
ಮದ್ಯಪಾನಿಗಳು, ಗಾಂಜ ವ್ಯಸನಿಗಳು, ಮದ್ಯ ಬಾಟಲ್, ನೀರಿನ ಬಾಟಲ್, ಆಹಾರ ವಸ್ತುಗಳ ಪಾರ್ಸಲ್ ಪ್ಯಾಕೆಟ್ ಗಳನ್ನು ಎಲ್ಲೆಂದರಲ್ಲಿ ಎಸೆದು ಮಲೀನ ಗೊಳಿಸುತ್ತಿದ್ದಾರೆ.ಕೋಳಿ ಮಾಂಸ ಮಾರಾಟಗಾರರು ಭಾರೀ ಪ್ರಮಾಣದಲ್ಲಿ ಕೋಳಿ ತ್ಯಾಜ್ಯವನ್ನು ಸುರಿಯುತ್ತಿದ್ದು ಪಾಣಾಜೆ, ಬೆಳ್ಳೂರು ಗ್ರಾ.ಪಂ, ಆದೂರು, ಸಂಪ್ಯ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ADVERTISE WITH US
0 Comments