ಪೆರ್ಲ:ಮನುಷ್ಯನ ದೇಹ ಮತ್ತು ಮನಸ್ಸು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.ದೇಹ ಮತ್ತು ಮನಸ್ಸು ಆರೋಗ್ಯವಾಗಿದ್ದರೆ ಮಾತ್ರ ಮನುಷ್ಯನ ಜೀವನ ಅರ್ಥಪೂರ್ಣ.ಮನುಷ್ಯ ಜೀವನಕ್ಕೆ ನೆಲೆ ಹಾಗೂ ಬೆಲೆ ಕಂಡು ಕೊಳ್ಳಲು, ಸದೃಢ ಬದುಕನ್ನು ಕಟ್ಟಿಕೊಳ್ಳಲು ಮಾನಸಿಕ ಆರೋಗ್ಯ ಅತ್ಯಗತ್ಯವಾಗಿದೆ ಎಂದು ಜಿಯೋಗ್ರಾಫಿ ವಿಭಾಗದ ಉಪನ್ಯಾಸಕಿ ಅರುಣಾ ಹೇಳಿದರು.
ಪೆರ್ಲ ನಾಲಂದ ಕಾಲೇಜಿನಲ್ಲಿ ರಾಷ್ಟೀಯ ಸೇವಾ ಯೋಜನೆ- 49 ನೇತೃತ್ವದಲ್ಲಿ ಮಂಗಳವಾರ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಮಾನಸಿಕ ಅನಾರೋಗ್ಯಕ್ಕೆ ಖಿನ್ನತೆ ಮುಖ್ಯ ಕಾರಣವಾಗಿದೆ.ಒತ್ತಡ, ನಿರ್ಲಕ್ಷ್ಯ, ಏಕಾಂಗಿತನ, ತಾರತಮ್ಯ, ಕಳಂಕ ಮುಂತಾದ ಸಾಮಾಜಿಕ ತೊಂದರೆ ತಾಪತ್ರಯಗಳು, ದುಶ್ಚಟಗಳಿಂದ ಮಾನಸಿಕ ಅಸ್ವಸ್ತತೆ ಉಂಟಾಗುತ್ತದೆ.ಯೋಗ, ಪ್ರಾಣಾಯಾಮ, ಸಂಗೀತ ಆಸ್ವಾದನೆ, ಪುಸ್ತಕ ಓದುವಿಕೆ ಇತ್ಯಾದಿ ಹಾವ್ಯಾಸ ಬೆಳೆಸಿದಲ್ಲಿ ವ್ಯಥಾ ಆಲೋಚನೆ, ಚಿಂತೆ, ದುಃಖ, ದುಗುಡಗಳು ನಮ್ಮನ್ನು ಕಾಡದು.ಮಾನಸಿಕ ಆರೋಗ್ಯದ ಕುರಿತು ಜಗತ್ತಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನ ಆಚರಿಸಲಾಗತ್ತಿದೆ ಎಂದರು.
ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ.ಯಂ.ಅಧ್ಯಕ್ಷತೆ ವಹಿಸಿ ಮಾತನಾಡಿ,ನಮ್ಮ ಮನಸ್ಸು ಮತ್ತು ಮನಸ್ಥಿತಿ ಆರೋಗ್ಯವಾಗಿದ್ದರೆ ಮಾತ್ರ ಜೀವನದ ಮೇಲೆ ನಿಯಂತ್ರಣ ಸಾಧಿಸಬಹುದು.ನಮ್ಮ ಜೀವನಪದ್ಧತಿ ಉತ್ತಮವಾಗಿದ್ದರೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗಿರುವುದು.ಒತ್ತಡದ ಬದುಕಿನಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ನಿರಂತರ ಯೋಗಾಭ್ಯಾಸ, ಧ್ಯಾನ, ಸಕಾರಾತ್ಮಕ ಚಿಂತನೆಗಳು, ಸಕಾರಾತ್ಮಕ ಕಾರ್ಯಗಳು ಮಾನಸಿಕ ಆರೋಗ್ಯ ವೃದ್ಧಿಗೆ ಹೆಚ್ಚು ಪೂರಕವಾಗಿವೆ.ಉತ್ತಮ ಹವ್ಯಾಸಗಳು ನಮ್ಮನ್ನು ಕ್ರಿಯಾಶೀಲವಾಗಿರಿಸುವುದರ ಜತೆಗೆ ನಮ್ಮ ಮನಸ್ಸಿನ ಆರೋಗ್ಯವನ್ನೂ ಕಾಪಾಡುವುದು ಎಂದರು.ವಿದ್ಯಾರ್ಥಿನಿ ಭಾಗ್ಯಶ್ರೀ ಸ್ವಾಗತಿಸಿದರು.ಅಂಜನಾ ವಂದಿಸಿದರು.ಕೌಸ್ತುಭ ನಿರೂಪಿಸಿದರು.
ADVERTISE WITH US
0 Comments